ಮಾನವಶಾಸ್ತ್ರ
ಮಾನವ ಮತ್ತು ಅವನ ಕಾರ್ಯಗಳನ್ನು ಕುರಿತು ಅಧ್ಯಯನ ಮಾಡುವ ಸಾಮಾಜಿಕ ವಿಜ್ಞಾನಗಳ ಪೈಕಿ ಒಂದು (ಆಂತ್ರೊಪಾಲಜಿ). `ಆಂತ್ರೊಪಾಲಜಿ' ಗ್ರೀಕ್ ಮೂಲದ ಆಂತ್ರೊಪೊದಿಂದ ನಿಷ್ಪನ್ನಗೊಂಡ ಪದ. ಮಾನವನನ್ನು ಕುರಿತು ವಿಜ್ಞಾನ ಎಂದು ಇದರ ಅರ್ಥ. ಮನುಷ್ಯನಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಇದು ಕೂಲಂಕುಷನಾಗಿ ವಿವೇಚಿಸುತ್ತದೆ. ಜನಾಂಗ ಮತ್ತು ಬುಡಕಟ್ಟುಗಳ ಅಧ್ಯಯನದಲ್ಲಿ ಇದರ ಪಾತ್ರ ಮಹತ್ತರವಾದುದು. ಒಟ್ಟಾರೆ ಮಾನವನ ಸಂಸ್ಕøತಿಯ ಅಧ್ಯಯನಕ್ಕೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ ಮುಂತಾದ ಕ್ಷೇತ್ರಗಳಿಂದ ಎಷ್ಟು ಪ್ರಯೋಜನವಿದೆಯೊ ಅಷ್ಟೇ ಪ್ರಯೋಜನ ಈ ಶಾಸ್ತ್ರದ ಅಧ್ಯಯನದಿಂದಲೂ ಉಂಟು.

ಮುಖ್ಯವಾಗಿ ಮಾನವನಿಗೆ ಸಂಬಂಧಿಸಿದ್ದಾದ್ದರಿಂದ ಮಾನವ ಎಲ್ಲಿ ವಾಸವಾಗಿದ್ದನೆಂಬುದನ್ನು ಪರಿಶೀಲಿಸುತ್ತದೆ. ಇತಿಹಾಸಪೂರ್ವದ ಮಾನವನ ವಿಷಯಗಳನ್ನು ಚರ್ಚಿಸುತ್ತದೆ. ಕಾಲ, ದೇಶ ಮತ್ತು ವರ್ತಮಾನಗಳ ಎಲ್ಲೆಯಿಲ್ಲದೆ ಮಾನವನಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಅಧ್ಯಯನ ಮಾಡುತ್ತದೆ. ಮನುಷ್ಯ ಎಲ್ಲಿಂದ ಬಂದ, ಹೇಗೆ ಹುಟ್ಟಿದ, ಹೇಗೆ ಬೆಳೆದ ಎಂಬುದನ್ನು ವರ್ಣಿಸುವುದರ ಜೊತೆಗೆ ಆಗಿನ ಸಾಮಾಜಿಕ ವ್ಯವಸ್ಥೆ ಹೇಗಿದ್ದಿತು ಎಂಬುದನ್ನೂ ವಿವರಿಸುತ್ತದೆ. ನಾಗರಿಕ, ಅನಾಗರಿಕ ಎಂಬ ಭೇದಭಾವ ಎಣಿಸದೆ ಪ್ರಪಂಚದ ಎಲ್ಲ ಮಾನವ ಸಮುದಾಯಗಳ ಸ್ಥಿತಿಗತಿಗಳನ್ನೂ ವಿಚಾರ ಮಾಡುತ್ತದೆ. ಮನುಷ್ಯನ ಬಾಹ್ಯರಚನೆಯ ವಿಕಾಸ ವಿಚಾರಪೂರ್ಣವಾಗಿ ಪರಿಶೀಲಿಸುತ್ತದೆ. ಇವುಗಳೊಂದಿಗೆ ಮಾನವನ ಕಲ್ಪನೆ, ಗ್ರಹಣಶಕ್ತಿ ಮತ್ತು ವಿಮೋಚನಾ ಶಕ್ತಿಗಳನ್ನೂ ತಿಳಿಸುತ್ತದೆ.

ವಾಸ್ತವವಾಗಿ, ಮಾನವ ಮತ್ತು ಅವನ ಕಾರ್ಯಗಳನ್ನು ಅಭ್ಯಸಿಸುವ ವಿಷಯ ಮಾನವಶಾಸ್ತ್ರ ಒಂದೇ ಅಲ್ಲ. ಇತರ ಜೈವಿಕ ವಿಜ್ಞಾನಗಳೂ ಮಾನವನನ್ನು ಕುರಿತು ಅಭ್ಯಸಿಸುತ್ತವೆ. ಉದಾಹರಣೆಗೆ ಅಂಗರಚನಾ ವಿಜ್ಞಾನ ಮಾನವನ ಶಾರೀರಿಕ ರಚನೆಯನ್ನು ಕುರಿತದ್ದಾದರೆ ಶರೀರವಿಜ್ಞಾನ, ಭ್ರೂಣವಿಜ್ಞಾನ ಮತ್ತಿತರ ವಿಜ್ಞಾನಗಳೂ ಮಾನವನ ದೈಹಿಕ ಸಂಗತಿಗಳನ್ನೇ ಕುರಿತಿರುತ್ತವೆ. ಮನಃಶಾಸ್ತ್ರ, ಸಮಾಜಶಾಸ್ತ್ರ ಮತ್ತು ಇತಿಹಾಸಗಳು ಮಾನವನ ನಡವಳಿಕೆಯನ್ನು ಕುರಿತು ಅಧ್ಯಯನ ಮಾಡುವ ವಿಷಯಗಳಾಗಿವೆ.

ಮಾನವಶಾಸ್ತ್ರೀಯ ಅಧ್ಯಯನಗಳಲ್ಲಿ ಜೈವಿಕವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನಗಳ ದೃಷ್ಟಿಧೋರಣೆಗಳ ಸಂಯೋಗ ಕಂಡುಬರುತ್ತದೆ. ಪ್ರಾಣಿಸಾಮ್ರಾಜ್ಯದ ಸದಸ್ಯನಾಗಿ ಮಾನವನ ಸ್ವಭಾವ ಎಂಥದು? ಮಾನವ ಸಮಾಜದ ಸದಸ್ಯನಾಗಿ ಅವನ ನಡವಳಿಕೆ ಯಾವ ಬಗೆಯದು? ಎಂಬ ಸಮಸ್ಯೆಗಳ ಮೇಲೆ ಮಾನವ ಶಾಸ್ತ್ರ ತನ್ನ ಅಧ್ಯಯನವನ್ನು ಕೇಂದ್ರೀಕರಿಸುತ್ತದೆ. ಒಟ್ಟಾರೆಯಾಗಿ ಮಾನವನ ಯಾವುದೇ ನಿರ್ದಿಷ್ಟ ಗುಂಪಿಗಾಗಲೀ ಇತಿಹಾಸದ ಯಾವುದೇ ಒಂದು ಅವಧಿಗಾಗಲೀ ಅದರ ಅಧ್ಯಯನ ಸೀಮಿತಗೊಂಡಿರುವುದಿಲ್ಲ. ಮೇಲಾಗಿ ಮಾನವಶಾಸ್ತ್ರಜ್ಞ ಮಾನವನ ಆರಂಭಿಕ ಅವಸ್ಥೆಗಳ ಬಗೆಗೆ ಎಷ್ಟು ಆಸಕ್ತಿ ಹೊಂದಿರುತ್ತಾನೊ ಆಧುನಿಕ ಮಾನವನ ನಡವಳಿಕೆಯ ಬಗೆಗೂ ಅಷ್ಟೇ ಆಸಕ್ತಿ ತಾಳುತ್ತಾನೆ. ಬಹಳ ಹಿಂದಿನಿಂದಲೂ ಮಾನವಶಾಸ್ತ್ರಜ್ಞರು ಮಾನವ ಸಮುದಾಯದ ಶಾರೀರಿಕ ರಚನೆಯ ವಿಕಾಸ ಹಾಗೂ ನಾಗರಿಕತೆಗಳ ಬೆಳವಣಿಗೆಯನ್ನು ಕುರಿತು ಅಧ್ಯಯನ ನಡೆಸುತ್ತ ಬಂದಿರುವಂತೆ ಸಮಕಾಲೀನ ಮಾನವಗುಂಪುಗಳು ಮತ್ತು ನಾಗರಿಕತೆಗಳ ಬಗೆಗೂ ಆಸಕ್ತಿ ವಹಿಸಿರುವುದು ಇದರ ತೌಲನಿಕ ಅಧ್ಯಯನಕ್ಕೆ ಬಹಳಷ್ಟು ಸಹಕಾರಿಯಾಗಿದೆ.

ಮಾನವಶಾಸ್ತ್ರೀಯ ಸಂಶೋಧನೆಯ ಕೇಂದ್ರವಸ್ತು ಮಾನವನ ಶಾರೀರಿಕ ಮತ್ತು ಸಾಂಸ್ಕøತಿಕ ವಿಕಾಸವನ್ನು ಗೌರವಿಸುವ ತತ್ವಗಳ ಅನ್ವೇಷಣೆಯನ್ನಾಧರಿಸಿದೆ. ಮನುಷ್ಯ ಶಾರೀರಿಕವಾಗಿ ಇತರ ಪ್ರಾಣಿಗಳಿಂದ ಏಕೆ ಬದಲಾದ? ಮಾನವನ ಸಾಂಸ್ಕøತಿಕ ಮತ್ತು ಭಾಷಿಕ ವೈವಿಧ್ಯ ಜೈವಿಕವಾಗಿ ಮತ್ತು ಅನುವಂಶೀಯವಾಗಿ ಬಂದ ನಡತೆಯಲ್ಲಿಯ ವ್ಯತ್ಯಾಸಗಳೇ? ಭಾಷೆ ಮತ್ತು ಸಂಸ್ಕøತಿಯಲ್ಲಿ ಕಾಣುವ ವ್ಯತ್ಯಾಸಗಳೇನು? ಸಂಸ್ಕøತಿಯ ಸ್ವರೂಪವೇನು? ಮತ್ತು ಹೇಗೆ ಸಂಸ್ಕøತಿಗಳು ಬದಲಾಗುತ್ತವೆ? ಮಾನವನ ಸಾಮಾಜಿಕ ಮತ್ತು ಸಾಂಸ್ಕøತಿಕ ನಡತೆಯ ಮೇಲೆ ಏನು ಸಂಬಂಧಗಳು ಸ್ಥಾಪನೆಗೊಳ್ಳುತ್ತವೆ? ವ್ಯಕ್ತಿಗಳು ಹೇಗೆ ತಮ್ಮ ಸಂಸ್ಕøತಿಯ ಆದರ್ಶ ಮತ್ತು ಗುರಿಗಳಿಗೆ ಪ್ರತಿಕ್ರಿಯಿಸುತ್ತಾರೆ? ಸಂಸ್ಕøತಿ ಮತ್ತು ವ್ಯಕ್ತಿತ್ವದ ನಡುವೆ ಉದ್ಭವಿಸುವ ಸಂಬಂಧ ಯಾವ ಬಗೆಯದು? ಈ ಎಲ್ಲ ಸಮಸ್ಯೆಗಳಿಗೂ ಒಂದೇ ಉತ್ತರ-ಎಲ್ಲ ಮಾನವ ಜನಾಂಗಗಳ ತೌಲನಿಕ ಅಧ್ಯಯನ. ಇದಕ್ಕಾಗಿ ಮಾನವಶಾಸ್ತ್ರ ಗತಕಾಲದ ಬದುಕನ್ನೂ ಇಂದಿಗೂ ಉಳಿಸಿಕೊಂಡಿರುವ ಮಾನವ ಜಗತ್ತನ್ನೇ ಪ್ರಯೋಗಾಲಯವಾಗಿ ಪರಿಗಣಿಸಿದೆ.
ಮೇಲೆ ಸೂಚಿಸಿದ ಸಮಸ್ಯೆಗಳೊಂದಿಗೆ ಇನ್ನೂ ಅನೇಕಾನೇಕ ಸಮಸ್ಯೆಗಳು ಈ ಶಾಸ್ತ್ರಕ್ಕೆ ಸಂಬಂಧಿಸಿವೆ. ಈ ಒಂದೊಂದು ಸಮಸ್ಯೆಯೂ ವಿಶಿಷ್ಟ ತಾಂತ್ರಿಕ ವಿಧಿ ವಿಧಾನಗಳ ಬೆಳಕಿನಲ್ಲಿ ವಿಶ್ಲೇಷಣೆಗೊಳಗಾಗುವಂಥವು. ಆದುದರಿಂದಲೇ ಇಂದು ಮಾನವಶಾಸ್ತ್ರ ಅವುಗಳಲ್ಲಿ ಮುಖ್ಯವಾದವು.

ಮಾನವ ಮತ್ತು ಅವನ ಸಂಸ್ಕøತಿಯ ಸಮಗ್ರ ಅಧ್ಯಯನ ನಡೆಸುವುದು ಮಾನವ ಶಾಸ್ತ್ರದ ಗುರಿ. ಮನುಷ್ಯನ ಶಾರೀರಿಕ ವಿಕಾಸವನ್ನು ಭೌತಿಕ ಮಾನವಶಾಸ್ತ್ರ ವರ್ಣಿಸುತ್ತದೆ. ಮನುಷ್ಯನ ಸಾಂಸ್ಕøತಿಕ ಮತ್ತು ಸಾಮಾಜಿಕ ವಿಕಾಸವನ್ನು ಸಾಂಸ್ಕøತಿಕ ಹಾಗೂ ಸಾಮಾಜಿಕ ಮಾನವಶಾಸ್ತ್ರಗಳು ವರ್ಣಿಸುತ್ತವೆ.

ಭೌತಿಕ ಮಾನವಶಾಸ್ತ್ರ (ಫಿಸಿಕಲ್ ಆಂತ್ರೊಪಾಲಜಿ): ಮಾನವನ ಶಾರೀರಿಕ ಲಕ್ಷಣಗಳನ್ನೇ ಕುರಿತ ಅಧ್ಯಯನ. ಮನುಷ್ಯನೆ ಹೇಗೆ ಜನಿಸಿದ? ನಿಜವಾಗಿಯೂ ಆತನ ಶರೀರ ವಿಕಾಸ ಹೊಂದಿದೆಯೆ? ಎನ್ನುವ ಪ್ರಶ್ನೆಗಳನ್ನು ಅದು ವಿವೇಚಿಸುತ್ತದೆ. ಮಾನವ ಮತ್ತು ವಾನರ ಇವುಗಳ ನಡುವೆ ಶರೀರ ಮತ್ತು ರಚನೆಯಲ್ಲಿ ವ್ಯತ್ಯಾಸಗಳಿಗಿಂತ ಹೋಲಿಕೆಗಳೇ ಹೆಚ್ಚಾಗಿ ಕಂಡುಬರುವ ಹಿನ್ನೆಲೆಯಲ್ಲಿ ಇವೆರಡಕ್ಕೂ ರಕ್ತ ಸಂಬಂಧ ಕಲ್ಪಿಸಲಾಗಿದೆ. ಇದು ಒಂದು ಪಂಥ. ಮನುಷ್ಯನಿಗೂ ಮಂಗಗಳಿಗೂ ಹೆಚ್ಚು ಹೋಲಿಕೆಗಳಿರುವುದರಿಂದ ಮನುಷ್ಯ ಮಂಗಗಳ ಬುಡಕಟ್ಟಿನಿಂದಲೇ ಮಾರ್ಪಾಡು ಹೊಂದಿರಬೇಕು ಎಂದು ಚಾಲ್ರ್ಸ್ ಡಾರ್ವಿನ್ ಪ್ರತಿಪಾದಿಸಿದ್ದಾನೆ. ಮತ್ತೊಂದು ಪಂಥದವರು ಮಾನವ ಶರೀರ ಪ್ರಪಂಚದ ಎಲ್ಲ ಜೀವರಾಶಿಗಳಂತೆ ವಿಕಾಸಹೊಂದಿಲ್ಲದಿರುವುದು ನಿಜ. ಬಹಳ ಸರಳ ಸ್ವರೂಪದ ಬಾಹ್ಯರಚನೆಯಿಂದ ಸಂಕೀರ್ಣ ಸ್ವರೂಪದ ಶರೀರವನ್ನು ಆತ ಹೊಂದಿದ್ದಾನೆ. ಹೀಗೆ ಮಾರ್ಪಾಡಾಗುವಾಗ ಅವನ ಸುತ್ತಮುತ್ತಲಿನ ಸನ್ನಿವೇಶ ಪರಿಸರಗಳೂ ಮಾನವ ಶರೀರ ಮಾರ್ಪಾಡಿಗೆ ಸಹಾಯಕವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಇದು ವಿಚಾರಣೀಯ ಅಂಶ.

ಇತರ ಜೀವಿಗಳಿಂದ ಮಾನವನನ್ನು ಪ್ರತ್ಯೇಕಗೊಳಿಸಿ ಅವನ ವಿಶಿಷ್ಟ ಸ್ವರೂಪ ಸ್ವಭಾವಗಳನ್ನು ವಿಶದಪಡಿಸುವುದಕ್ಕಾಗಿ ಮಾನವನಲ್ಲಿ ಕಂಡುಬರುವ ಜೈವಿಕ ವ್ಯತ್ಯಾಸಗಳನ್ನು ಅರ್ಥವಿಸುವುದು ಅಗತ್ಯ. ಈ ಕೆಲಸವನ್ನು ಭೌತಿಕ ಮಾನಶಾಸ್ತ್ರ ನಿರ್ವಹಿಸುತ್ತದೆ. ಪ್ರಾಚೀನ ಮಾನವನ ಶಾರೀರಿಕ ರಚನೆ, ಅಂಗರಚನಾ ವಿನ್ಯಾಸದಲ್ಲಿ ಈಗಿನ ಮಾನವನಿಗೂ ಅವನಿಗೂ ಇರುವ ವ್ಯತ್ಯಾಸಗಳನ್ನು ಎತ್ತಿ ಹೇಳುವುದು ಕೂಡ ಭೌತಿಕ ಮಾನವಶಾಸ್ತ್ರದ ಗುರಿಯಾಗಿರುತ್ತದೆ. ಭೌತಿಕ ಮಾನವಶಾಸ್ತ್ರ ಜನಸಂಖ್ಯೆಯ ವಿಶ್ಲೇಷಣೆ ಮಾಡುವುದರೊಂದಿಗೆ ವಿಕಾಸ ಪ್ರಕ್ರಿಯೆಯ ಉತ್ಪನ್ನವಾಗಿ ಪ್ರಾಣಿಸಾಮ್ರಾಜ್ಯದಲ್ಲಿ ಮಾನವನ ಸ್ಥಾನವೇನೆಂಬುದನ್ನು ಹೇಳುವ ಪ್ರಯತ್ನವನ್ನೂ ಮಾಡುತ್ತದೆ. ಈ ಎರಡೂ ಉದ್ದೇಶ ಮೇಲ್ನೋಟಕ್ಕೆ ಭಿನ್ನವಾಗಿ ಕಂಡರೂ ಅವುಗಳಿಂದ ದೊರಕುವ ಫಲಿತಾಂಶ ಹತ್ತಿರ ಹತ್ತಿರ ಸಮೀಪ ಸಂಬಂಧವುಳ್ಳದ್ದಾಗಿರುತ್ತದೆ. ಮೊದಲನೆಯ ಉದ್ದೇಶಕ್ಕೆ ಪಡೆದ ಮಾಹಿತಿ ಎರಡನೆಯ ಸಮಸ್ಯೆಯ ವಿವೇಚನೆಗೂ ಬಳಕೆಗೊಳ್ಳುತ್ತದೆ. ಹೀಗೆ ಈ ಎರಡೂ ಸಮಸ್ಯೆಗಳು ಮಾನವನನ್ನೇ ಕುರಿತಿವೆ.

ವಿಕಾಸ ಪ್ರಕ್ರಿಯೆಯ ಉತ್ಪನ್ನವಾದ ಮಾನವನನ್ನು ಅರ್ಥಮಾಡಿಕೊಳ್ಳಲು ಎಲ್ಲ ಜೀವಿಗಳ ಬೆಳೆವಣಿಗೆ ಮತ್ತು ಜೀವನ ಸ್ವರೂಪವನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಭೌತಿಕ ಮಾನವಶಾಸ್ತ್ರ ಮಾನವನ ಶಾರೀರಿನ ಲಕ್ಷಣಗಳ ಇತಿಹಾಸದ ಕಡೆಗೆ ಹೆಚ್ಚು ಗಮನ ಕೇಂದ್ರಿಕರಿಸುತ್ತದೆ. ಇದು ಆರಂಭಿಕ ಮಾನವನ ಅವಶೇಷಗಳಿಗಾಗಿ ಭೂಮಿಯ ಶೋಧ ನಡೆಸುವುದಲ್ಲದೆ ಹಾಗೆ ದೊರತ ಅವಶೇಷಾಧಾರಗಳನ್ನು ಆಧುನಿಕ ಮಾನವನೊಂದಿಗೆ ಹೋಲಿಸಿ ಅಧ್ಯಯನ ಮಾಡಲು ಅನುವುಕೂಡ ಮಾಡಿಕೊಡುತ್ತದೆ. ಒಟ್ಟಿನಲ್ಲಿ ಭೌತಿಕ ಮಾನವಶಾಸ್ತ್ರ ಮಾನವನಲ್ಲಿ ಕಾಲದಿಂದ ಕಾಲಕ್ಕೆ ಉಂಟಾದ ಶಾರೀರಿಕ ಬದಲಾವಣೆಗಳ ಅಧ್ಯಯನ ಮಾಡಲು ಅನುವುಕೂಡ ಮಾಡಿಕೊಡುತ್ತದೆ. ಒಟ್ಟಿನಲ್ಲಿ ಭೌತಿಕ ಮಾನವಶಾಸ್ತ್ರ ಮಾನವನಲ್ಲಿ ಕಾಲದಿಂದ ಕಾಲಕ್ಕೆ ಉಂಟಾದ ಶಾರೀರಿಕ ಬದಲಾವಣೆಗಳ ಅಧ್ಯಯನ ನಡೆಸುತ್ತದೆ.

ಸಾಂಸ್ಕøತಿಕ ಮಾನವಶಾಸ್ತ್ರ (ಕಲ್ಚರಲ್ ಆಂತ್ರೊಪಾಲಜಿ): ಇದು ಮಾನವ ಸಂಸ್ಕøತಿಯನ್ನು ಕುರಿತ ಅಧ್ಯಯನ. ಎಲ್ಲ ಕಾಲ ಮತ್ತು ಸ್ಥಳದ ಮಾನವ ಸಂಸ್ಕøತಿಗಳ ಮೂಲ ಮತ್ತು ಇತಿಹಾಸ, ಅವುಗಳ ವಿಕಾಸ ಮತ್ತು ಬೆಳೆವಣಿಗೆ, ಅವುಗಳ ರಚನೆ ಮತ್ತು ಕಾರ್ಯವನ್ನು ಅಧ್ಯಯನ ಮಾಡುತ್ತದೆ. ಅದು ಶಿಲಾಯುಗದ ಆದಿಮಾನವನಿಗೆ ಸಂಬಂಧಿಸಿದ್ದಾಗಿರಬಹುದು. ಇಲ್ಲವೆ ಯೂರೊಪಿಯನ್ ನಗರವಾಸಿಗಳಿಗೆ ಸಂಬಂಧಿಸಿದ್ದಾಗಿರಬಹುದು. ಈ ಶಾಸ್ತ್ರದಲ್ಲಿ ನಾಲ್ಕು ಉಪಶಾಖೆಗಳನ್ನು ಗುರುತಿಸಲಾಗಿದೆ: 1 ಪ್ರಾಕ್ತನ ಶಾಸ್ತ್ರ, 2 ಭಾಷಾವಿಜ್ಞಾನ, 3 ಮಾನವಕುಲಶಾಸ್ತ್ರ 4 ಸಾಮಾಜಿಕ ಮಾನವಶಾಸ್ತ್ರ. ಪ್ರತಿಯೊಂದು ಒಂದೊಂದು ಅಧ್ಯಯನ ಗುರಿಹೊಂದಿವೆ.

ಇತಿಹಾಸಪೂರ್ವಕಾಲದ ಸಂಸ್ಕøತಿಯನ್ನು ಅಧ್ಯಯನ ಮಾಡುವುದು ಪ್ರಾಕ್ತನ ಶಾಸ್ತ್ರದ ಗುರಿ. ಅದು ಪ್ರಾಥಮಿಕವಾಗಿ, ಪುರಾತನ ಸಂಸ್ಕøತಿ ಮತ್ತು ಆಧುನಿಕ ನಾಗರಿಕತೆಗಳ ವಿವಿಧ ಹಂತಗಳನ್ನು ಕುರಿತು ಅಭ್ಯಾಸ ಮಾಡುತ್ತದೆ. ಅಲ್ಲದೆ ಹಿಂದಿಕ ಸಾಂಸ್ಕøತಿಕ ರೂಪಗಳನ್ನು ಪುನಾರಚಿಸಲು ಮತ್ತು ಅವುಗಳ ಗತಾನುಗತಿಕ ಬೆಳೆವಣಿಗೆಯನ್ನು ಗುರ್ತಿಸಲು ಅದು ಯತ್ನಿಸುತ್ತದೆ. ಪುರಾತತ್ವಶಾಸ್ತ್ರಜ್ಞ ಸಾಂಸ್ಕøತಿಕ ಇತಿಹಾಸ ಮತ್ತು ಬೆಳೆವಣಿಗೆಗೆ ಮಹತ್ತ್ವದ ಕೊಡುಗೆ ನೀಡುತ್ತಾನೆ. ಮಾನವ ಎಲ್ಲಿ ಮತ್ತು ಯಾವಾಗ ಸಂಸ್ಕøತಿಯನ್ನು ಗಳಿಸಿಕೊಂಡ ಎಂಬುದನ್ನು ಅವನು ತಿಳಿಸುತ್ತಾನೆ. ಅಲ್ಲದೆ ಅನಕ್ಷರಸ್ಥರ ಸಾಂಸ್ಕøತಿಕ ಇತಿಹಾಸವನ್ನು ತಿಳಿಸುವ ಪ್ರಯತ್ನವನ್ನೂ ಮಾಡುತ್ತಾನೆ. ಮಾನವ ಸಂಸ್ಕøತಿಗಳ ವಿಕಾಸದ ಬಗೆಗೆ ವಿಚಾರ ಮಾಡುವುದರೊಂದಿಗೆ ಒಂದು ಸಾಂಸ್ಕøತಿಕ ಬಗೆ ಮತ್ತೊಂದನ್ನು ಹಿಂದಕ್ಕೆ ಹಾಕಿಬಂದ ಸಂಗತಿಯ ವಿವರಗಳನ್ನೂ ಕೊಡುತ್ತಾನೆ.

ಪುರಾತತ್ವ ಸಂಶೋಧನೆಗಳು ಹಿಂದಿನದನ್ನು ಪುನಾರಚಿಸುವ ಕೆಲಸವೊಂದರಲ್ಲಷ್ಟೇ ತೊಡಗಿರುವುದಿಲ್ಲ. ಸಂಸ್ಕøತಿಗಳು ಬದಲಾವಣೆ ಹೊಂದಲು ಅನುಸರಿಸುವ ಮಾರ್ಗೋಪಾಯಗಳ ಬಗೆಗೂ ಸಾಕಷ್ಟು ಸೂಚನೆಗಳನ್ನು ಕೊಡುತ್ತವೆ. ವಾಸ್ತವವಾಗಿ ಪ್ರಾಕ್ತನಶಾಸ್ತ್ರ ಮಾನವನಕುಲಶಾಸ್ತ್ರ ಮತ್ತು ಭಾಷಾಶಾಸ್ತ್ರಗಳಂಥ ಸಾಮಾಜಿಕ ವಿಜ್ಞಾನಗಳು ಸಂಗ್ರಹಿಸಿದ ಮಾಹಿತಿಗಳನ್ನು ಸಂಕಲಿಸುತ್ತದೆ. ಅಲ್ಲಿಯ ಸಾಮಗ್ರಿಗಳೊಂದಿಗೆ ಹೋಲಿಸಿ ನೋಡಿದಾಗ, ಪುರಾತತ್ವಶಾಸ್ತ್ರಜ್ಞ ಒದಗಿಸುವ ಮಾಹಿತಿ ಸಾಂಸ್ಕøತಿಕ ಬದಲಾವಣೆಗೆ ಕಾರಣವಾಗುವ ಅನೇಕ ಸಂಕೀರ್ಣ ಸಂಗತಿಗಳನ್ನು ಅರಿತುಕೊಳ್ಳಲು ಸಹಾಯಕ ಎನಿಸುತ್ತದೆ.

ಪುರಾತತ್ವ ಸಂಶೋಧನೆ ನಿಂತಲ್ಲಿಂದ ಮಾನವಕುಲಶಾಸ್ತ್ರದ (ಎತ್ನಾಲಜಿ) ಸಂಶೋಧನೆ ತೊಡಗುತ್ತದೆ. ಎಲ್ಲೆಲ್ಲಿ ವೈವಿಧ್ಯಪೂರ್ಣವಾದ ಸಂಸ್ಕøತಿಗಳು ಕಾಣಸಿಗುತ್ತವೊ ಅವನ್ನು ಹುಡುಕುವ ಮತ್ತು ವಿವರಿಸುವ ಕೆಲಸವನ್ನು ಮಾನವಕುಶಾಸ್ತ್ರಜ್ಞ ನಿರ್ವಹಿಸುತ್ತಾನೆ. ಮಾನವಸಂಸ್ಕøತಿಗಳ ನಡುವೆ ಎದ್ದು ಕಾಣುವ ಸಾದೃಶ್ಯ ಮತ್ತು ವೈದೃಶ್ಯಗಳನ್ನು ವಿವರಿಸುವ ಉದ್ದೇಶ ಆತನದು. ಇತ್ತೀಚೆಗಂತೂ ಮಾನವಕುಲಶಾಸ್ತ್ರಜ್ಞರು ಸಮಾಜದಲ್ಲಿ ವ್ಯಕ್ತಿಯ ಪಾತ್ರವೇನು ಎಂಬುದರ ಕಡೆಗೂ ಗಮನಹರಿಸಿದ್ದಾರೆ.
ಮಾನವಕುಲಶಾಸ್ತ್ರದಲ್ಲಿ ಮಾನವಕುಲ ವಿವರಣಶಾಸ್ತ್ರ (ಎತ್ನಾಗ್ರಫಿ) ಎಂಬ ಮತ್ತೊಂದು ಉಪಶಾಖೆಯಿದೆ. ಸಂಪ್ರದಾಯಗಳ ವಿವರಣಾತ್ಮಕ ಅಧ್ಯಯನ ಮಾನವಕುಲವಿವರಣಶಾಸ್ತ್ರದ ಉದ್ದೇಶವಾದರೆ ಬೇರೆ ಬೇರೆ ಸಂಸ್ಕøತಿಗಳಿಗಿರುವ ಸಾಮ್ಯ ವೈಷಮ್ಯಗಳನ್ನು ಚಾರಿತ್ರಿಕ ವಿಧಾನದಿಂದ ಅಭ್ಯಸಿಸುವುದು ಮಾನವಕುಲ ಶಾಸ್ತ್ರದ ಗುರಿ.

ಸಾಮಾಜಿಕ ಮಾನವಶಾಸ್ತ್ರದಲ್ಲಿ (ಸೋಷಿಯಲ್ ಆಂತ್ರೊಪಾಲಜಿ) ಮಾನವನ ಸಾಮಾಜಿಕ ಸಂಬಂಧಗಳ ಅಧ್ಯಯನ ನಡೆಸುವುದು ವಾಡಿಕೆ. ಈ ಸಾಮಾಜಿಕ ಮಾನವಶಾಸ್ತ್ರ ಪ್ರಪಂಚದ ಸಂಸ್ಕøತಿಗಳ ಅಧ್ಯಯನವನ್ನು ಗುರಿಯಾಗಿ ಹೊಂದಿದ್ದರೆ ಮಾನವಕುಲಶಾಸ್ತ್ರ ಆದಿವಾಸಿ ಸಂಸ್ಕøತಿಗಳ ಅಧ್ಯಯನಕ್ಕೆ ಸೀಮಿತ. ಒಂದೇ ವಿಷಯ ಸಾಮಗ್ರಿಯನ್ನು ಬಳಸಿಕೊಳ್ಳುವ ಈ ಎರಡೂ ಶಾಸ್ತ್ರಗಳು ಬೇರೆ ಬೇರೆ ಅಧ್ಯಯನ ಕ್ರಮಗಳನ್ನು ರೂಪಿಸಿಕೊಂಡಿರುವುದು ಒಂದು ವಿಶೇಷ. ಪ್ರಾಚೀನ ಕುಟುಂಬ ಮತ್ತು ಮದುವೆ ಪದ್ಧತಿ, ಪ್ರಾಚೀನ ಕಾಲದ ಮತಧರ್ಮಗಳು, ಗೋತ್ರ ಮತ್ತು ಬಹಿಷ್ಕಾರಾಜ್ಞೆಗಳು, ಕಾಯಿದೆ, ಕಾನೂನು, ಆಸ್ತಿ ಮುಂತಾದವನ್ನು ಸಾಮಾಜಿಕ ಮಾನವಶಾಸ್ತ್ರ ಅಭ್ಯಸಿಸುತ್ತದೆ. ಪ್ರಾಚೀನ ಕುಟುಂಬ ವ್ಯವಸ್ಥೆಗಳ ಬಗೆಗೆ ವಿಸ್ತಾರವಾದ ವಿಶ್ಲೇಷಣೆ ನಡೆಸುತ್ತದೆ.
ಮಾನವಕುಲಶಾಸ್ತ್ರದ ಒಂದು ಶಾಖೆಯಾಗಿದ್ದ ಭಾಷಾವಿಜ್ಞಾನದ (ಲಿಂಗ್ವಿಸ್ಟಿಕ್ಸ್) ಸ್ಥಾನವೂ ಮಹತ್ತ್ವ ಪೂರ್ಣವಾದುದು. ಭಾಷೆಯ ಮೂಲ ಮತ್ತು ಬೆಳೆವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ವಿಷ್ಲೇಷಣೆ ಭಾಷಾವಿಜ್ಞಾನದ ಗುರಿ. ಮಾನವಕುಲ ಶಾಸ್ತ್ರದಲ್ಲಿಯಂತೆ ಇಲ್ಲಿಯೂ ಅಶಿಕ್ಷಿತರ ಭಾಷೆಗಳ ಕುರಿತ ಅಧ್ಯಯನಗಳನ್ನು ನಡೆಸಲಾಗುವುದು. ಪ್ರಪಂಚದ ಎಲ್ಲ ಭಾಷೆಗಳ ಅಧ್ಯಯನ ಗುರಿ ಇದಕ್ಕುಂಟು.

ಮಾನವಭಾಷೆಯ ಸ್ವರೂಪವನ್ನು ಅಭ್ಯಸಿಸುವುದು ಭಾಷಾವಿಜ್ಞಾನದ ಗುರಿ. ಇಂದು ಮಾತನಾಡುವ ಹಾಗೂ ಲಿಖಿತ ದಾಖಲೆಗಳ ಮೂಲಕ ದೊರಕುವ ಭಾಷೆಗಳನ್ನು ಅದು ಅಭ್ಯಸಿಸುತ್ತದೆ. ಭಾಷಾವಿಜ್ಞಾನಿ ಭಾಷೆಯ ಮೂಲ ಮತ್ತು ಬೆಳೆವಣಿಗೆಯಲ್ಲಷ್ಟೇ ಆಸಕ್ತಿ ಹೊಂದಿರದೆ ಭಾಷೆಯ ರಚನೆ ಮತ್ತು ಅದರ ಬೆಳೆವಣಿಗೆಯಲ್ಲೂ ಕುತೂಹಲ ತಾಳುತ್ತಾನೆ. ಎಲ್ಲ ಮಾನವ ಸಮಾಜಗಳ, ಮಾನವಸಂಸ್ಕøತಿಗಳ ಹಿಂದಿನ ಅಥವಾ ಇಂದಿನ ಸಾಂಸ್ಕøತಿಕ ಬೆಳೆವಣಿಗೆಯ ಮಟ್ಟವನ್ನಷ್ಟೆ ಗಣನೆಗೆ ತೆಗೆದುಕೊಳ್ಳದೆ ಹಿಂದಿನ ಮತ್ತು ಇಂದಿನ ಎಲ್ಲ ಮಾನವ ಸಮಾಜಗಳ ಸಂಸ್ಕøತಿಯಲ್ಲೂ ಆಸಕ್ತಿ ಹೊಂದಿರುತ್ತಾನೆ. ಅವನಿಗೆ ಜನಪದ ಪುರಾಣ ಮತ್ತು ಐತಿಹ್ಯಗಳಲ್ಲಿ ಮಾನವ ಸೃಷ್ಟಿ ಮತ್ತು ಐತಿಹ್ಯಗಳಲ್ಲಿ ಮಾನವ ಸೃಷ್ಟಿ ಮತ್ತು ಹಿಂದಿನ ಸಂಸ್ಕøತಿಯ ಪರಿಚಯ ಆಗುತ್ತದೆ. ಮಾನವನ ಅಲೆಮಾರಿ ಬದುಕು, ನೆಲೆಯನ್ನು ಹುಡುಕಿಕೊಂಡು ಹೋದುದು, ಬೆಂಕಿಯನ್ನು ಕಂಡುಹಿಡಿದುದು, ಹೊಸ ಹೊಸ ಆಯುಧ ಸಲಕರಣೆ ಮತ್ತು ಕಲೆಗಳ ಶೋಧ ಮತ್ತು ಗಳಿಕೆ ಅಥವಾ ಆಹಾರ ಉತ್ಪಾದನೆಗಾಗಿ ಅನುಸರಿಸಿದ ಬೇರೆ ಬೇರೆ ತಂತ್ರ ವಿಧಾನಗಳು ಎಲ್ಲಕ್ಕೂ ಪುರಾಣಗಳು ಸಾಮಗ್ರಿಯನ್ನು ಒದಗಿಸುತ್ತವೆ.

ಸಾಂಸ್ಕøತಿಕ ಮಾನವಶಾಸ್ತ್ರ ಕ್ಷೇತ್ರ ಬಹು ವಿಸ್ತಾರವಾದುದು. ಅದು ಮಾನವ ಚಟುವಟಿಕೆಗಳೆಲ್ಲವನ್ನೂ ಒಳಗೊಳ್ಳುತ್ತದೆ. ಅದರ ಎಲ್ಲ ಶಾಖೆಗಳೂ ಪರಸ್ಪರ ನಿಕಟ ಸಂಬಂಧವನ್ನು ಹೊಂದಿವೆ. ಈ ಎಲ್ಲವೂ ತಮಗೆ ವಿಶಿಷ್ಟವಾದ ವಸ್ತು ವಿಷಯವನ್ನು ಹೊಂದಿವೆ ಮತ್ತು ತಮಗೆ ವಿಶಿಷ್ಟವಾದ ಅಧ್ಯಯನ ವಿಧಾನವನ್ನೂ ರೂಢಿಸಿಕೊಂಡಿವೆ.

ಮಾನವಶಾಸ್ತ್ರ ಮತ್ತು ಪೂರಕ ವಿಜ್ಞಾನಗಳು: ಮಾನವಶಾಸ್ತ್ರವನ್ನು ಸಾಮಾಜಿಕವಿಜ್ಞಾನ ಎಂದು ಪರಿಗಣಿಸಲಾಗಿದ್ದರೂ ಸಮಾಜಶಾಸ್ತ್ರ, ಮನಃಶಾಸ್ತ್ರ, ಭೂಗೋಳ, ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳೊಂದಿಗೆ ಅದು ಹೊಂದಿರುವ ಪ್ರಾಥಮಿಕ ಸಂಬಂಧಗಳಿಂದಾಗಿ ಜೈವಿಕ ವಿಜ್ಞಾನಗಳು ಅಥವಾ ಮಾನವಿಕ ವಿಜ್ಞಾನಗಳಿಂದ ಅದು ಬೇರೆಯಲ್ಲ. ಮನುಷ್ಯನನ್ನು ಕುರಿತು ಅಧ್ಯಯನ ಮಾಡುವ ಅಂಗರಚನಾ ವಿಜ್ಞಾನ, ಶರೀರವಿಜ್ಞಾನ, ಭ್ರೂಣವಿಜ್ಞಾನ ಮತ್ತು ತಳಿವಿಜ್ಞಾನಗಳಂಥ ಶಾಸ್ತ್ರಗಳ ಜೊತೆಯಲ್ಲೂ ಮಾನವಶಾಸ್ತ್ರ ಸಂಬಂಧ ಸಾಧಿಸುತ್ತದೆ. ಅವು ಮಾನವಶಾಸ್ತ್ರ ಮತ್ತು ಇತರ ಮಾನವಿಕ ವಿಜ್ಞಾನಗಳಾದ ಇತಿಹಾಸ, ಸಾಹಿತ್ಯ, ಕಲೆ ಮತ್ತು ಸಂಗೀತಗಳೊಂದಿಗೆ ಅಷ್ಟೇ ಮಹತ್ತ್ವದ ಬಾಂಧವ್ಯವನ್ನು ಹೊಂದಿವೆ. ಮಾನವಕುಲಶಾಸ್ತ್ರ, ಪ್ರಾಕ್ತನಶಾಸ್ತ್ರ ಮತ್ತು ಭಾಷಾವಿಜ್ಞಾನ ಕ್ಷೇತ್ರಗಳು ಮಾನವಸಂಸ್ಕøತಿಯನ್ನು ಅರಿಯಲು, ಅದರ ಮಹತ್ತ್ವವನ್ನು ವಿವರಿಸಲು ಸಹಾಯಕವಾಗಿವೆ.
ಇತಿಹಾಸಪೂರ್ವಕಾಲದ ಮಾನವಜೀವಿಯ ಕಾಲ ನಿರ್ಧರಿಸಲು ಶಾರೀರಿಕ ಮಾನವಶಾಸ್ತ್ರಜ್ಞರು ಭೂವಿಜ್ಞಾನಿಗಳ ನೆರವನ್ನು ಯಾಚಿಸಬೇಕಾಗುತ್ತದೆ. ಅವರ ನೆರವಿನಿಂದ ಮಾನವ ವಿಕಾಸದ ಬಗೆಗಿನ ಸಮಸ್ಯೆಗಳನೇಕವನ್ನು ಬಗೆಹರಿಸಬಹುದಾಗಿದೆ. ಸಾಮಗ್ರಿ ವರ್ಗೀಕರಣಕ್ಕೆ ಎಷ್ಟೊ ವೇಳೆ ಪ್ರಾಣಿ ಮತ್ತು ಸಸ್ಯ ವಿಜ್ಞಾನಿಗಳು ರೂಪಿಸಿದ ವರ್ಗೀಕರಣ ತತ್ತ್ವವನ್ನು ಶಾರೀರಿಕ ಮಾನವಶಾಸ್ತ್ರಜ್ಞರು ಬಳಸಿಕೊಳ್ಳುವುದುಂಟು. ವಾಸ್ತವವಾಗಿ, ಶಾರೀರಿಕ ಮಾನವಶಾಸ್ತ್ರ ಅಂಗರಚನಾವಿಜ್ಞಾನ ಮತ್ತು ವೈದ್ಯಕೀಯ ಸಂಶೋಧನೆಯ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ.

ಮಾನವಶಾಸ್ತ್ರ ಮತ್ತು ಪೂರಕವಿಜ್ಞಾನಗಳ ಎರಡನೆಯ ಬಗೆಯ ಆಂತರಿಕ ಸಂಬಂಧ ಇತರ ವಿಜ್ಞಾನಗಳ ತಂತ್ರವಿಧಾನಗಳ ಬಳಕೆಯನ್ನು ಹೇಳುವಂಥದ್ದಾಗಿದೆ. ಉದಾಹರಣೆಗೆ ಖಗೋಳವಿಜ್ಞಾನದ ಮಾಹಿತಿಯಿಂದ ಆದಿಮಾನವರ ತಾರೀಕು ಪಟ್ಟಿಯನ್ನು ಅರ್ಥವಿಸಬಹುದು. ಇತಿಹಾಸಪೂರ್ವದ ಕುಂಭಕಲೆಗಳ ಅಧ್ಯಯನಕ್ಕೆ ರಸಾಯನ ಮತ್ತು ಭೌತವಿಜ್ಞಾನ ವಿಧಾನಗಳು ನೆರವಿಗೆ ಬರುತ್ತವೆ. ಅಲ್ಲದೆ ಸಾಧನಸಲಕರಣೆಗಳ ಉತ್ಪಾದನಾ ತಂತ್ರವಿಧಾನಗಳನ್ನು ಕಂಡುಕೊಳ್ಳಲು ಸಹಾಯಕವಾಗುತ್ತವೆ. ಇದೇ ರೀತಿಯಲ್ಲಿ ಖನಿಜ ವಿಜ್ಞಾನಿ ಕೂಡ ಮಾನವಶಾಸ್ತ್ರೀಯ ಸಂಶೋಧನೆಗೆ ಸಹಾಯ ಹಸ್ತ ನೀಡುತ್ತಾನೆ. ಲೋಹವಿದ್ಯಾತಜ್ಞರ ಸಹಾಯದಿಂದ ಲೋಹಸಲಕರಣೆಗಳ ಸಂಯೋಜನೆಯನ್ನು ವಿವರಿಸಬಹುದು. ವಿನ್ಯಾಸಕಾರರ ನೆರವಿನಿಂದ ಕಟ್ಟಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುತ್ತಾನೆ. ಮಾನವಶಾಸ್ತ್ರಜ್ಞ. ಔಷಧವಿಜ್ಞಾನಿಗಳ ನೆರವಿನಿಂದ ಆದಿಕಾಲದ ಬಾಣವಿಷದ ಸಮಸ್ಯೆಗಳನ್ನು ಬಗೆಹರಿಸಬಹುದು. ಆದ್ದರಿಂದ ಮಾನವ ಶಾಸ್ತ್ರಜ್ಞರು ಶಿಸ್ತುಗಳ ಶಕ್ತಿಸಾಮಥ್ರ್ಯವನ್ನು ಅರಿತವರಾಗಬೇಕು ಮತ್ತು ಅವರಿಗೆ ಪ್ರಚಲಿತ ಸಮಸ್ಯೆಗಳ ಅರಿವು ಇರುವುದು ಆವಶ್ಯಕ.

ಮಾನವಶಾಸ್ತ್ರ ಮತ್ತು ಇತರ ವಿಜ್ಞಾನಗಳ ನಡುವಿನ ಮೂರನೆಯ ಬಗೆಯ ಸಂಬಂಧವೆಂದರೆ ಕೆಲವು ಸಮಸ್ಯೆಗಳು, ತಂತ್ರ ವಿಧಾನಗಳು ಮತ್ತು ಸಿದ್ಧಾಂತಗಳಲ್ಲಿ ಪರಸ್ಪರಾವಲಂಬನವಿರುವುದು, ಮಾನವಶಾಸ್ತ್ರ ಇತರ ವಿಜ್ಞಾನಗಳ ಸಾಮಗ್ರಿಯನ್ನು ತಂತ್ರಗಳನ್ನು ಬಳಸಿಕೊಳ್ಳುವುದರ ಜೊತೆಗೆ ಆ ತಂತ್ರ ಮತ್ತು ಸಿದ್ಧಾಂತಗಳ ಬೆಳೆವಣಿಗೆಗಾಗಿ ತನ್ನದೇ ಆದ ಕೊಡುಗೆಗಳನ್ನೂ ನೀಡುತ್ತದೆ.

ಮಾನವಶಾಸ್ತ್ರ ಮತ್ತು ಜೈವಿಕ ವಿಜ್ಞಾನಗಳ ನಡುವಿನ ಸಂಬಂಧ ನಿಕಟವಾದುದು. ಸಾಂಸ್ಕøತಿಕ ಮಾನವಶಾಸ್ತ್ರದ ಮೊದಲಿನ ತತ್ತ್ವ, ಸಿದ್ಧಾಂತಗಳು, ಪರಿಕಲ್ಪನೆಗಳು ಅವುಗಳ ನಡುವಿನ ಸಂಬಂಧವನ್ನು ಸಾರಿ ಹೇಳುತ್ತವೆ. ಮಾನವಶಾಸ್ತ್ರ ಸಾಮಾಜಿಕ ವಿಜ್ಞಾನಗಳಲ್ಲೆಲ್ಲ ನಿರೀಕ್ಷೆಯ ಮಟ್ಟಕ್ಕಿಂತ ಕಡಿಮೆ ಸಂಬಂಧ ಹೊಂದಿರುವುದು ಮನಶ್ಯಾಸ್ತ್ರದೊಂದಿಗೆ ಮಾತ್ರ. ಕೆಲವು ಕಾಲದ ತನಕ ಈ ಎರಡೂ ಶಿಸ್ತುಗಳು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿರುತ್ತವೆ. ಮನಶ್ಯಾಸ್ತ್ರ ವ್ಯಕ್ತಿಯ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಹೆಚ್ಚು ಆಸಕ್ತಿ ತಾಳಿದ್ದರೆ ಮಾನವಶಾಸ್ತ್ರ ಮಾನವನ ಸಾಂಸ್ಕøತಿಕ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಡುತ್ತದೆ.

ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ನಡುವಿನ ಸಂಬಂಧ ವಾಸ್ತವವಾಗಿ ಅವು ಹೊಂದಿರಬೇಕಾದ ಸಂಬಂಧದ ಎತ್ತರಕ್ಕೆ ಬೆಳೆದೇ ಇಲ್ಲ. ಬಲು ಹಿಂದೆಯೇ ಮಾನವಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ಈ ಎರಡೂ ಶಾಸ್ತ್ರಗಳು ಸಮಾನವಾದವನ್ನು ಹೊಂದಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾನವಶಾಸ್ತ್ರ ಹೆಚ್ಚು ಹೆಚ್ಚಾಗಿ ಸರಳ ಹಾಗೂ ಸ್ವತಂತ್ರವಾಗಿ ವಾಸಿಸುವ ಜನರ ಜೀವನದ ಮೇಲೆ ಕೇಂದ್ರೀಕೃತವಾಗಿದ್ದರೆ ಸಮಾಜಶಾಸ್ತ್ರ ಬಹು ಮುಖ್ಯವಾಗಿ ಪಾಶ್ಚಾತ್ಯ ಯೂರೋಪಿಯನ್ ನಾಗರಿಕತೆಯನ್ನು ಕುರಿತಿರುತ್ತದೆ. ವಿಷಯ ವ್ಯಾಪ್ತಿಯಲ್ಲಿಯ ಈ ವ್ಯತ್ಯಾಸ ಅಧ್ಯಯನ ವಿಧಾನದಲ್ಲೂ ಅನೇಕ ವ್ಯತ್ಯಾಸಗಳನ್ನು ತರುತ್ತದೆ. ಮಾನವಶಾಸ್ತ್ರಜ್ಞ ಜನಾಂಗಗಳನ್ನು ಸಣ್ಣ ಸಣ್ಣ ಗುಂಪಾಗಿ ವಿಂಗಡಿಸಿಕೊಂಡು ಅಭ್ಯಸಿಸಿದರೆ ಸಮಾಜಶಾಸ್ತ್ರಜ್ಞ ಈ ಮಾನವಶಾಸ್ತ್ರೀಯ ಸಂಶೋಧನೆಯ ಫಲಶ್ರುತಿಗಳನ್ನು ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಬಳಸಿಕೊಳ್ಳುತ್ತಾನೆ.

ಇನ್ನೊಂದು ದೃಷ್ಟಿಯಿಂದ ನೋಡಿದಾಗ, ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದ ಮೂಲಭೂತ ಸಮಸ್ಯೆಗಳು ಸಾಕಷ್ಟು ಸಾದೃಶ್ಯವುಳ್ಳಂಥವು. ಇಬ್ಬರೂ ಪರಸ್ಪರರ ಸಾಮಗ್ರಿಯನ್ನು ಬಳಸಿಕೊಳ್ಳುವ ವಿಷಯದಲ್ಲಿ ಹೆಚ್ಚಿನ ಒಲವು ತೋರುತ್ತಾರೆ. ನಿಜವಾಗಿಯೂ ಮಾನವಶಾಸ್ತ್ರಜ್ಞ ಮಾನವನನ್ನು ಕುರಿತ ಇತರ ಶಿಸ್ತುಗಳನ್ನು ಅಖಂಡಗೊಳಿಸುವುದಕ್ಕಾಗಿ ಕೆಲಸ ಮಾಡುತ್ತಾನೆ. ಮಾನವನನ್ನು ಕುರಿತು ಅಧ್ಯಯನ ಮಾಡುವ ಬಹುತೇಕ ವಿಜ್ಞಾನಗಳು ಮಾನವನಿಗೆ ಸಂಬಂಧಿಸಿದ ಕೆಲವೇ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿವೆ. ಆದರೆ ಮಾನವಶಾಸ್ತ್ರ ಮಾತ್ರ ಮಾನವನ ಎಲ್ಲ ಬಗೆಯ ಸಮಸ್ಯೆಗಳ ಮೇಲೂ ತನ್ನ ಗಮನವನ್ನು ಹರಿಸಿದೆ. ಅರ್ಥಶಾಸ್ತ್ರಜ್ಞ ತನ್ನ ಸಮಸ್ಯೆಗಳನ್ನು ಆಲೋಚನೆ ಮತ್ತು ನಡವಳಿಕೆಗಳಿಂದ ಪ್ರತ್ಯೇಕವಾದ ಕ್ರಮದ ಭಾಗವಾಗಿ ನೋಡಿದರೆ ಮಾನವಶಾಸ್ತ್ರಜ್ಞ ಒಟ್ಟು ಸಂಸ್ಕøತಿಯ ರಚನೆ ಮತ್ತು ಸಂಸ್ಕøತಿಯ ಇತರ ಅಂಶಗಳೊಂದಿಗಿನ ಅಂತರ ಸಂಬಂಧಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಾನೆ.

ಇತರ ಸಾಮಾಜಿಕ ವಿಜ್ಞಾನಿಗಳಂತೆ ಮಾನವಶಾಸ್ತ್ರಜ್ಞರೂ ಪ್ರಚಲಿತ ಸಮಸ್ಯೆಗಳನ್ನು ಬಿಡಿಸುವ ಕೆಲಸದಲ್ಲಿ ತಮ್ಮ ಪಾಲಿನ ಸೇವೆ ಸಲ್ಲಿಸುತ್ತಿದ್ದಾರೆ. ಗಡಿಪ್ರದೇಶ ಸಾಮಾಜಿಕ ನಿಯಂತ್ರಣ, ಶಿಕ್ಷಣ ಮತ್ತು ಸಾರ್ವಜನಿಕ ಕಲ್ಯಾಣದ ಸಮಸ್ಯೆಗಳಿಗೆ ಉತ್ತರ ಹುಡುಕಲು ಅವರು ಯತ್ನಿಸಿದ್ದಾರೆ; ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೆಲಸ ಮಾಡಿದ್ದಾರೆ. ಕೇವಲ ಅಶಿಕ್ಷಿತ, ಅನಾಗರಿಕ ಜನಾಂಗಗಳಿಗಷ್ಟೇ ತಮ್ಮ ಅಧ್ಯಯನವನ್ನು ಸೀಮಿತಗೊಳಿಸಿಕೊಳ್ಳದೆ ನಗರ ಸಮುದಾಯಕ್ಕೂ ವಿಸ್ತರಿಸಿಕೊಂಡಿದ್ದಾರೆ. ಅಂತರ ಜಾನಾಂಗಿಕ, ಅಂತರ ಸಾಂಸ್ಕøತಿಕ ಸಮಸ್ಯೆಗಳು, ಕೈಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ಶಿಶುತರಬೇತಿ, ರಾಷ್ಟ್ರೀಯ ನಡೆವಳಿಕೆಗೆ ಸಂಬಂಧಿಸಿದ ಸಮಸ್ಯೆಗಳು ಇನ್ನು ಮುಂತಾದವನ್ನು ಬಗೆಹರಿಸಲು ಮಾನವ ಶಾಸ್ತ್ರಜ್ಞರು ಶಕ್ತಿಮೀರಿ ಯತ್ನಿಸಿದ್ದಾರೆ. ಜನವಾಹಿನಿಯಿಂದ ಬೇರೆಯಾಗಿ ಸ್ವತಂತ್ರ ಜೀವನ ನಡೆಸುತ್ತಿರುವ ಸಂಸ್ಕøತಿ ಸಮೂಹಗಳು ನಾಗರಿಕ ಸಂಪರ್ಕ ಸಾಧಿಸಿಕೊಂಡಾಗ ಹೊಂದಾಣಿಕೆಯ ಜೀವನ ನಡೆಸುವಂತೆ ಮಾಡಲು ಬೇಕಾದ ಸಲಹೆ ಮಾರ್ಗದರ್ಶನಗಳನ್ನು ನೀಡುವವರು ಮಾನವ ಶಾಸ್ತ್ರಜ್ಞರೇ. ಆಡಳಿತಾಧಿಕಾರಿಗಳ ತರಬೇತಿ, ರಕ್ಷಣಾಬಲಗಳ ವಿಶೇಷ ಘಟಕಗಳ ತರಬೇತಿ ಮತ್ತು ಸಂಘಟನೆ, ಈ ಎಲ್ಲಕ್ಕೂ ಮಾನವಶಾಸ್ತ್ರಜ್ಞರು ರೂಪಿಸಿರುವ ತಂತ್ರವಿಧಾನಗಳನ್ನೇ ಪ್ರಸ್ತುತ ಬಳಸಲಾಗುತ್ತಿದೆ.

ವಾಸ್ತವವಾಗಿ, ಮೊದಲ ಮಹಾಯುದ್ಧದತನಕ ಯಾರೂ ಮಾನವಶಾಸ್ತ್ರದ ಪ್ರಾಯೋಗಿಕ ಅನ್ವಯವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಆ ಹೊತ್ತಿಗಾಗಲೇ ಮಾನವಶಾಸ್ತ್ರದ ಫಲಿತಗಳನ್ನು ಬಳಸಿಕೊಳ್ಳುವ ವಿಚಾರವಾಗಿ ಅನೇಕ ಸಲಹೆಗಳು ಬಂದಿದ್ದವಾದರೂ ಯಾರೂ ಅವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿಜವಾಗಿಯೂ ಮಾನವಶಾಸ್ತ್ರದ ಫಲಿತಗಳನ್ನು ವ್ಯಾಪಕವಾಗಿ ಬಳಸಿಕೊಂಡವರು ಫ್ರೆಂಚ್, ಬ್ರಿಟಿಷ್ ಮತ್ತು ಡಚ್ ವಸಾಹತು ಆಡಳಿತಗಾರರು. ಸಂಯುಕ್ತ ಸಂಸ್ಥಾನ ಮತ್ತು ಭಾರತೀಯ ಸೇವೆಗಳಲ್ಲೂ ಮಾನವಶಾಸ್ತ್ರದ ಬಳಕೆ ಹೆಚ್ಚಾಗಿ ಕಂಡುಬರುತ್ತದೆ. ಸ್ಥಳೀಯ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಎಲ್ಲೆಲ್ಲಿ ಮಾನವ ಶಾಸ್ತ್ರೀಯ ತಂತ್ರ ಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳಲಾಗಿದೆಯೊ ಅಲ್ಲೆಲ್ಲ ಆಡಳಿತ ಪರಿಣಾಮಕಾರಿಯಾಗಿಯೂ ತೃಪ್ತಿಕರವಾಗಿಯೂ ಕಂಡುಬಂದಿದೆ. ಈಚಿನ ವರ್ಷಗಳಲ್ಲಂತೂ ಮಾನವಶಾಸ್ತ್ರೀಯ ತಂತ್ರವಿಧಾನಗಳು ತುಂಬ ಪ್ರಯೋಜನಕಾರಿಯಾಗಿ ಕಂಡುಬಂದಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಮಿಕರು ಮತ್ತು ಉದ್ಯಮಿಗಳ ನಡುವಿನ ಸಂಘರ್ಷಕ್ಕೆ ಕಾರಣ ಹುಡುಕಲು ಮತ್ತು ಅದನ್ನು ನಿವಾರಿಸಲು ಮಾನವಶಾಸ್ತ್ರ ಇಂದು ಪರಿಣಾಮಕಾರಿ ಸಾಧನವಾಗಿ ಬಳಕೆಗೊಳ್ಳುತ್ತಿದೆ. ಅಲ್ಪಸಂಖ್ಯಾತರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಡಲು ಮತ್ತು ಮರು ಒಪ್ಪಂದದ ಯೋಜನೆಗಳನ್ನು ವ್ಯವಸ್ಥೆಗೊಳಿಸಲು ಮಾನವಶಾಸ್ತ್ರದ ಉಪಯೋಗವುಂಟು. ಇತ್ತೀಚೆಗೆ ಯುನೆಸ್ಕೋವಿನ ಸಮುದಾಯ ಮತ್ತು ಆರ್ಥಿಕ ಬೆಳೆವಣಿಗೆ ಕಾರ್ಯಕ್ರಮಗಳ ಸಂಬಂಧದಲ್ಲಿ ಮಾನವಶಾಸ್ತ್ರಜ್ಞರು ಹೆಚ್ಚು ಹೆಚ್ಚಾಗಿ ನೇಮಕಗೊಳ್ಳುತ್ತಿದ್ದಾರೆ. ಅಮೆರಿಕೆಯಲ್ಲಿ ತಮ್ಮ ರಾಷ್ಟ್ರ ಮತ್ತು ರಾಜ್ಯಗಳ ವೈದ್ಯಕೀಯ ಮತ್ತು ಸಾರ್ವಜನಿಕ ಕಲ್ಯಾಣಕ್ರಮದ ಹಲವು ಮುಖಗಳನ್ನು ಅಧ್ಯಯನಿಸಲು ಮಾನವ ಸಾರ್ವಜನಿಕ ಕಲ್ಯಾಣಕ್ರಮದ ಹಲವು ಮುಖಗಳನ್ನು ಅಧ್ಯಯನಿಸಲು ಮಾನವ ಶಾಸ್ತ್ರಜ್ಞರು ಹೊಸ ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಾಣಿಕೆಯನ್ನು ಚುರುಕುಗೊಳಿಸಲು ಮತ್ತು ಅದನ್ನು ಪ್ರೋತ್ಸಾಹಿಸಲು ಮಹತ್ತ್ವದ ಪಾತ್ರ ವಹಿಸುತ್ತಿದ್ದಾರೆ. ಮೆಕ್ಸಿಕೋ, ಭಾರತ, ಈಜಿಪ್ಟ್ ಈ ಕೆಲವು ರಾಷ್ಟ್ರಗಳಲ್ಲಿ ಮಾನವಶಾಸ್ತ್ರದ ಅನ್ವಯ ಪಾತ್ರ ವಿಸ್ತಾರಗೊಂಡಿದೆ.

ಭೌತಿಕ ಮಾನವಶಾಸ್ತ್ರಕ್ಕೂ ಅನ್ವಯಿಕ ಮುಖಗಳಿವೆ. ಮಾನವ ಬಳಕೆಯ ಯಂತ್ರಗಳ ಉತ್ತಮ ವಿನ್ಯಾಸಕ್ಕೆ ಅದರ ಕೊಡುಗೆಯುಂಟು. ಮನುಷ್ಯರು ಉಪಯೋಗಿಸುವ ಉಡುಗೆತೊಡುಗೆಗಳು, ಕೃತಕ ಕೈಕಾಲು, ರೆಕ್ಕೆಗಳಿಗೂ ಅದು ಹಾಗೂ ಕಾನೂನು ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ. ಅದರಲ್ಲೂ ವೈದ್ಯಕೀಯ ವಿಜ್ಞಾನದ ನೂತನಶಾಖೆ ಭ್ರೂಣವಿಜ್ಞಾನಕ್ಕೂ ಅದರ ಕೊಡುಗೆ ಕಡಿಮೆಯೇನಲ್ಲ.

ಒಟ್ಟಿನಲ್ಲಿ ಮಾನವಶಾಸ್ತ್ರದಲ್ಲಿ ಬಳಸಲಾಗುತ್ತಿರುವ ಚಾರಿತ್ರಿಕ ವಿಧಾನಗಳು ಮತ್ತು ಚಾರಿತ್ರಿಕವಲ್ಲದ ವಿಧಾನಗಳು ಸಂಸ್ಕøತಿ ಪ್ರಕ್ರಿಯೆಗಳಲ್ಲಿ ಹಾಗೂ ಸಂಸ್ಕøತಿಯ ಬಗೆಗಿನ ತೀರ್ಮಾನ ಕೈಗೊಳ್ಳುವಲ್ಲಿ ಅತಿಯಾದ ಆಸಕ್ತಿ ಹೊಂದಿರುವುದನ್ನು ಕಾಣುತ್ತೇವೆ. ಚಾರಿತ್ರಿಕ ದೃಷ್ಟಿಕೋನವುಳ್ಳವರು ಸಾಂಸ್ಕøತಿಕ ವಿಜ್ಞಾನದೆಡೆಗೆ ತಮ್ಮ ಲಕ್ಷ್ಯ ಹರಿಸುತ್ತಿರುವುದು ಶುಭ ಚಿಹ್ನೆಯಾಗಿದೆ. ಚಾರಿತ್ರಕವಲ್ಲದ ಕ್ರಮ ಅನುಸರಿಸುವವರು ಸಾಂಸ್ಕøತಿಕ ವಿಜ್ಞಾನಗಳ ಬೆಳವಣಿಗೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ; ಸ್ವತಂತ್ರ ಸಮಾಜಗಳು ಮತ್ತು ಅವುಗಳ ಗುಣಲಕ್ಷಣಗಳಿಗೆ ಅವರು ಹೆಚ್ಚು ಒತ್ತುಕೊಡುತ್ತಿದ್ದಾರೆ. ಈಚಿನ ವರ್ಷಗಳಲ್ಲಂತೂ ಮಾನವಶಾಸ್ತ್ರದ ಫಲಶ್ರುತಿಗಳನ್ನು ನಾನಾ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವ ರೀತಿ ಪ್ರೋತ್ಸಾಹದಾಯಕವಾಗಿದೆ.
(ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ